ನವರಾತ್ರಿ ವಿಶೇಷ ಅಡುಗೆಗಳು

ನವರಾತ್ರಿ ಸಾಂಪ್ರದಾಯಿಕ ಅಡುಗೆ

ಶರದ್ ಋತುವಿನಲ್ಲಿ ಆಚರಿಸುವ ನವರಾತ್ರಿಯಲ್ಲಿ ವಿಶೇಷವಾಗಿ ಶಕ್ತಿ ದೇವತೆಯನ್ನು ಆರಾಧಿಸುತ್ತಾರೆ. ಆಶ್ವೀಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಒಂಬತ್ತು ದಿನಗಳಲ್ಲಿ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸುತ್ತಾರೆ. ನವರಾತ್ರಿಯ ಮೊದಲ ಮೂರು ದಿನಗಳು ಋಗ್ವೇದ ಸ್ವರೂಪಳಾದ ಮಹಾಕಾಳಿಯನ್ನು, ದ್ವಿತೀಯ ಮೂರು ದಿನಗಳನ್ನು ಸಾಮವೇದ ಸ್ವರೂಪಳಾದ ಮಹಾ ಸರಸ್ವತಿಯನ್ನು,ತೃತೀಯ ಮೂರು ದಿನಗಳನ್ನು ಯಜುರ್ವೇದ ಸ್ವರೂಪಳಾದ ಮಹಾಲಕ್ಷ್ಮಿಯನ್ನು ಅರ್ಚಿಸುತ್ತಾರೆ. ಏಳನೆಯ ದಿನ ಶಾರದಾ ಪೂಜೆಯನ್ನು ಹಾಗು ಹತ್ತನೆಯ ದಿನ ವಿಜಯ ದಶಮಿಯನ್ನು ಆಚರಿಸುತ್ತಾರೆ.

ದೇವಿಗೆ ಪ್ರಿಯವಾದ ಹಾಲು ಪಾಯಸ,ಚಿತ್ರಾನ್ನ ಹಾಗು ಮೊಸರನ್ನವನ್ನು ನೈವೇದ್ಯ ಮಾಡುತ್ತಾರೆ. ಇದರ ಜೊತೆಗೆ ಪ್ರತಿದಿನವೂ ವಿಶೇಷ ಭಕ್ಷ್ಯಗಳನ್ನು ನೈವೇದ್ಯಕ್ಕೆ ಮಾಡುತ್ತಾರೆ. ಈ ಭಕ್ಷ್ಯಗಳನ್ನು ತಯಾರಿಸುವ ವಿಧಾನವನ್ನು ಈ ಕೇಳಗೆ ನೀಡಲಾಗಿದೆ.

ನವರಾತ್ರಿ ಹಬ್ಬದಲ್ಲಿ ಉಪವಾಸ ಮಾಡುವವರು ಆ ಒಂಭತ್ತು ದಿನ ತಮ್ಮ ಆಹಾರಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿರುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಹಾಕಿದ ಪದಾರ್ಥಗಳನ್ನು ತಿನ್ನುವುದಿಲ್ಲ, ಕೆಲವರೂ ಎಣ್ಣೆಯನ್ನು ಕೂಡ ಬಳಸುವುದಿಲ್ಲ. ವ್ರತದ ಅಡುಗೆಯನ್ನು ತುಪ್ಪ ಬಳಸಿ ಮಾಡುತ್ತಾರೆ. ಪುಡಿ ಉಪ್ಪು ಮತ್ತು ಸಂಸ್ಕರಿಸಿದ ಗೋಧಿ ಹಿಟ್ಟನ್ನು ಬಳಸುವಂತಿಲ್ಲ. ಆದರೆ ಕಲ್ಲುಪ್ಪು ಮತ್ತು ಸಂಸ್ಕರಿಸದ ಗೋಧಿ ಹಿಟ್ಟನ್ನು ಬಳಸಬಹುದು.ಚಪಾತಿ, ಅವಲಕ್ಕಿ ಮತ್ತು ಫ್ರೂಟ್ ಸಲಾಡ್ ಇವುಗಳು ಪ್ರಮುಖವಾದ ವ್ರತ ಆಹಾರಗಳಾಗಿವೆ. ಇಲ್ಲಿ ನಾವು ನವರಾತ್ರಿ ಸಮಯದಲ್ಲಿ ವ್ರತ ಮಾಡುವವರಿಗೆ ಬಾಯಿಗೆ ರುಚಿಕರವಾದ ಕೆಲವು ಆಹಾರಗಳ ಬಗ್ಗೆ ಹೇಳಿದ್ದೇವೆ ನೋಡಿ:

ಫ್ರೈ ಆಲೂ ಸಬ್ಜಿ:  

ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಬೇಯಿಸಿದ ಬೇಬಿ ಆಲಕೂಗಡ್ಡೆಯನ್ನು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಒಂದು ಪೇಪರ್ ನಲ್ಲಿ ಹಾಕಿಡಿ. * ನಂತರ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ನಂತರ ಜೀರಿಗೆ ಮತ್ತು ಕರಿಬೇವಿನ ಎಲೆ ಹಾಕಿ, ಅರಿಶಿಣ ಪುಡಿ, ಕಲ್ಲುಪ್ಪು, ಕೊತ್ತಂಬರಿ ಪುಡಿ, ಖಾರದ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ, ನಂತರ ಫ್ರೈ ಮಾಡಿದ ಆಲೂಗಡ್ಡೆ ಹಾಕಿ 5 ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ವ್ರತ ರೆಸಿಪಿ ರೆಡಿ.
=========================================================================

ಹುರುಳಿಕಾಳಿನ ಪರೋಟ:

ಹುರುಳಿಕಾಳು ಆರೋಗ್ಯಕ್ಕೆ ಹಿತ. ಅದರಲ್ಲೂ ನವರಾತ್ರಿ ದಿನ ಒಪ್ಪೊತ್ತಿನ ಉಪವಾಸಕ್ಕೆ ಹುರುಳಿಕಾಳಿನ ಈ ಪರೋಟ ಹೇಳಿ ಮಾಡಿಸಿದ್ದು.
ಪರೋಟಾಗೆ ಬೇಕಾಗುವ ಪದಾರ್ಥ:* 2 ಕಪ್ ಹುರುಳಿಕಾಳಿನ ಹಿಟ್ಟು* 2 ಆಲೂಗಡ್ಡೆ (ಬೇಯಿಸಿ ಸಿಪ್ಪೆ ತೆಗೆದು ಕಲಸಿರಬೇಕು)* 1 ಚಮಚ ಉಪ್ಪು* ತುಪ್ಪ

ಹುರುಳಿಕಾಳಿನ ಪರೋಟ ಮಾಡುವ ವಿಧಾನ: ಮೊದಲು ಚೆನ್ನಾಗಿ ಹಿಸುಕಿದ ಆಲೂಗಡ್ಡೆಯೊಂದಿಗೆ ಹುರುಳಿಕಾಳಿನ ಹಿಟ್ಟನ್ನು ಉಪ್ಪಿನೊಂದಿಗೆ ಕಲೆಸಿಕೊಳ್ಳಬೇಕು. ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಬೆರೆಸಿ ಪರೋಟ ಹಿಟ್ಟಿನಂತೆ ಕಲೆಸಿ 30 ನಿಮಿಷ ಹಾಗೆ ಇಡಬೇಕು. 30 ನಿಮಿಷದ ನಂತರ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಪರೋಟದಂತೆ ಒತ್ತಿಕೊಳ್ಳಬೇಕು. ತವೆಯನ್ನು ಬಿಸಿ ಮಾಡಿ ಪರೋಟ ಹಾಕಿ ಸುತ್ತಲೂ ತುಪ್ಪ ಹಾಕಬೇಕು. ಅದು ಸ್ವಲ್ಪ ಕೆಂಪಗಾಗುವ ತನಕ ಬೇಯಿಸಿ ಮಗುಚಬೇಕು. ಹೀಗೆ ಎರಡೂ ಕಡೆ ಪರೋಟ ಬೆಂದ ನಂತರ ತವೆಯಿಂದ ಇಳಿಸಿದರೆ ಹುರುಳಿಕಾಯಿ-ಆಲೂ ಪರೋಟ ತಿನ್ನಲು ಸಿದ್ಧವಾಗಿರುತ್ತೆ.
=========================================================================

ಫ್ರೂಟ್ ಸಲಾಡ್:

ನವರಾತ್ರಿ ಹಬ್ಬದಲ್ಲಿ ಒಪ್ಪೊತ್ತಿನ ಉಪವಾಸ ಮಾಡುವವರು ಹಣ್ಣು ಸೇವಿಸುವುದು ರೂಢಿ. ಆದರೆ ಬರಿ ಹಣ್ಣು ತಿಂದರೆ ಅತಿ ಸಿಹಿಎನಿಸಬಹುದು. ಜೊತೆಗೆ ಒಂದಿಷ್ಟು ರುಚಿ ಬೆರೆಸಿದರೆ ತಿನ್ನಲೂ ಚೆಂದ, ಉಪವಾಸವೂ ಆದ ಹಾಗೆ. ಆದ್ದರಿಂದ ಮಿಶ್ರಿತ ಹಣ್ಣುಗಳನ್ನು ಬಳಸಿಕೊಂಡು ಬಾಯಿಗೆ ಹಿತವೆನಿಸುವಂತೆ ಸಲಾಡ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.ಫ್ರೂಟ್ ಸಲಾಡ್ ಗೆ ಇಷ್ಟು ಹಣ್ಣುಗಳಿರಲಿ: ದ್ರಾಕ್ಷಿ, ಸೇಬು, ಬಾಳೆಹಣ್ಣು, ದಾಳಿಂಬೆ, ಪಪ್ಪಾಯ, ಸೀಬೆಹಣ್ಣು, ಸಪೋಟಮಸಾಲೆಗೆ ಇವುಗಳಿರಲಿ: ಚಾಟ್ ಮಸಾಲ, ಉಪ್ಪು, ಮೆಣಸಿನ ಪುಡಿಮಿಕ್ಸ್
ಫ್ರೂಟ್ ಸಲಾಡ್ ಹೀಗೆ ತಯಾರಿಸಿ:* ಸೇಬು, ಸೀಬೆ, ಬಾಳೆಹಣ್ಣು, ಪಪ್ಪಾಯ ಮತ್ತು ಸಪೋಟಾ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.* ದ್ರಾಕ್ಷಿ ಮತ್ತು ದಾಳಿಂಬೆಯನ್ನು ಬಿಡಿಸಿ ಕತ್ತರಿಸಿದ ಹಣ್ಣುಗಳೊಂದಿಗೆ ಬೆರೆಸಬೇಕು.* ಇದಕ್ಕೆ ಅಗತ್ಯವೆನಿಸಿದಷ್ಟು ಚಾಟ್ ಮಸಾಲಾ,ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ ಹದವಾಗಿ ಮಿಕ್ಸ್ ಮಾಡಿದರೆ ಮಿಕ್ಸ್ ಫ್ರೂಟ್ ಸಲಾಡ್ ರೆಡಿಯಾಗಿರುತ್ತೆ. ಮನೆಮಂದಿಗೆಲ್ಲಾ ಹಂಚಿದರೆ ನಿಮಿಷದಲ್ಲಿ ಸಲಾಡ್ ಖಾಲಿಯಾಗಿರುತ್ತೆ.
=========================================================================

ವ್ರತ ಅವಲಕ್ಕಿ ಉಪ್ಪಿಟ್ಟು:

ಅವಲಕ್ಕಿಯನ್ನು ತೊಳೆದು ಇಡಿ.* ನಂತರ ಪಾತ್ರೆಗೆ ತುಪ್ಪ ಹಾಕಿ ನಂತರ ಜೀರಿಗೆ, ಪಲಾವ್ ಎಲೆ, ಲವಂಗ, ಕರಿ ಮೆಣಸು, ಚಕ್ಕೆ ಹಸಿ ಮೆಣಸಿನಕಾಯಿ ಹಾಕಿ, ನಂತರ ಬೇಯಿಸಿ ಹಿಸುಕಿದ ಆಲೂಗಡ್ಡೆ ಹಾಕಿ, ಅರಿಶಿಣ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ, ಅವಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ 2 ನಿಮಿಷ ಸೌಟ್ ನಿಂದ ಆಡಿಸಿ ತೆಗೆದರೆ ವ್ರತ ಅವಲಕ್ಕಿ ಉಪ್ಪಿಟ್ಟು ರೆಡಿ.
 

=========================================================================

ಖುಷ್ ಖುಷ್ ಆಲೂ:

ಮೊದಲು ಅರ್ಧ ಕಪ್ ಗಸೆಗಸೆಯನ್ನು 10 ನಿಮಿಷ ನೆನೆ ಹಾಕಿ ನಂತರ ಗಸೆಗಸೆ, ಹಸಿ ಮೆಣಸಿನಕಾಯಿ ಹಾಕಿ ಪೇಸ್ಟ್ ಮಾಡಿ ನಂತರ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ.* ಪ್ಯಾನ್ ಗೆ 2 ಚಮಚ ತುಪ್ಪ ಹಾಕಿ ಅದರಲ್ಲಿ ಬೇಯಿಸಿ, ಕತ್ತರಿಸಿದ ಆಲೂಗಡ್ಡೆಯನ್ನು ಹಾಕಿ ಫ್ರೈ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಹಾಕಿಡಿ. * ಈಗ ಪ್ಯಾನ್ ಬಿಸಿ ಮಾಡಿ ಅದರಲ್ಲಿ 2 ಚಮಚ ತುಪ್ಪ ಹಾಕಿ, ನಂತರ ಪೇಸ್ಟ್ ಮಾಡಿದ ಮಿಶ್ರಣವನ್ನು ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ಫ್ರೈ ಮಾಡಿದ ಆಲೂಗಡ್ಡೆ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ, ಅರಿಶಿಣ ಪುಡಿ ಹಾಕಿ ಗ್ರೇವಿ ರೀತಿ ಆಗುವವರೆಗೆ ಬೇಯಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಖುಷ್ ಖುಷ್ ಆಲೂ ರೆಡಿ
=========================================================================

ಕಡಲೆ ಕಾಳಿನ ಕರಿ:

ಕಡಲೆ ಕಾಳನ್ನು ಅನೇಕ ಖಾದ್ಯಗಳಿಗೆ ಬಳಸಲಾಗುತ್ತೆ. ಮಸಾಲೆ ಬೆರೆಸಿ ಕಡಲೆ ಕಾಳಿನ ಗೊಜ್ಜು ತಯಾರಿಸಿದರೆ ತಿನ್ನಲು ತುಂಬಾ ರುಚಿಕರ. ಥಟ್ ಅಂತ ರೆಡಿಯಾಗುವ ಈ ಕಡಲೆ ಕಾಳಿನ ಗೊಜ್ಜನ್ನು ಹೀಗೆ ತಯಾರಿಸಿ ಸವಿಯಿರಿ.
ಬೇಕಾಗುವ ಪದಾರ್ಥಗಳು:* 1 ಕಪ್ ಕಡಲೆಕಾಳು* 1/2 ಚಮಚ ಜೀರಿಗೆ, 1/2 ಚಮಚ ಸಾಸಿವೆ* 2-4 ಕತ್ತರಿಸಿದ ಹಸಿರು ಮೆಣಸಿನ ಕಾಯಿ* ಕೊತ್ತಂಬರಿ, ಕರಿಬೇವು * 1/2 ಚಮಚ ಕೆಂಪು ಮೆಣಸಿನ ಪುಡಿ* ಉಪ್ಪು, ಎಣ್ಣೆ, ಏಲಕ್ಕಿ ಪುಡಿ* ಟೊಮೆಟೊ ಪೇಸ್ಟ್* ಸ್ವಲ್ಪ ಗರಂ ಮಸಾಲ
 
ಕಡಲೆ ಕಾಳಿನ ಗೊಜ್ಜು ಮಾಡುವುದು ಹೀಗೆ: ಹಿಂದಿನ ರಾತ್ರಿಯೇ ಕಡಲೆ ಕಾಳನ್ನು ನೆನೆಸಿರಬೇಕು. ಕನಿಷ್ಠ 6 ಗಂಟೆಯಾದರೂ ನೆನೆಸಿರಬೇಕು. ಅದನ್ನು ಕುಕ್ಕರ್ ನಲ್ಲಿ ಬೇಯಿಸಿ ನೀರನ್ನು ಬೆಸೆದು ಒಂದೆಡೆ ಇಡಬೇಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಜೀರಿಗೆ, ಸಾಸಿವೆ ಹಾಕಿ ಅದು ಸಿಡಿಯುತ್ತಿದ್ದಂತೆ ಕರಿಬೇವು ಹಾಕಿ ಕತ್ತರಿಸಿದ ಹಸಿರು ಮೆಣಸಿನ ಕಾಯಿ ಬೆರೆಸಿ ತಿರುಗಿಸಬೇಕು. ನಂತರ ಉಪ್ಪು, ಕೊತ್ತಂಬರಿ, ಕೆಂಪು ಮೆಣಸಿನ ಪುಡಿ ಬೆರೆಸಿ ಚೆನ್ನಾಗಿ ತಿರುಗಿಸಬೇಕು. ನಂತರ ಇದಕ್ಕೆ ಟೊಮೆಟೊ ಪೇಸ್ಟ್ ಹಾಕಿ ನೀರು ಹಾಕಿ ಸ್ವಲ್ಪ ಗಟ್ಟಿಯಾಗುವವರೆಗೂ ತಿರುಗಿಸುತ್ತಿರಬೇಕು. ಆಮೇಲೆ ಬೇಯಿಸಿದ ಕಡಲೆ ಕಾಳನ್ನು ಸೇರಿಸಿ ಗರಂ ಮಸಾಲೆ ಮತ್ತು ಏಲಕ್ಕಿ ಪುಡಿ ಹಾಕಿ 5-6 ನಿಮಿಷ ಚೆನ್ನಾಗಿ ಬೇಯಿಸಿದರೆ ಕಡಲೆ ಕಾಳಿನ ಗೊಜ್ಜು ತಿನ್ನಲು ರೆಡಿಯಾಗಿರುತ್ತೆ.
========================================================================= 

ಬಾಳೆಕಾಯಿ ಮಸಾಲೆ ಗ್ರೇವಿ:

ಇಲ್ಲಿ ನಾವು ಈರುಳ್ಳಿ, ಬೆಳ್ಳುಳ್ಳಿ ಹಾಕದೆ ಮಾಡುವ ಬಾಳೆಕಾಯಿ ಮಸಾಲೆ ಗ್ರೇವಿಯ ರೆಸಿಪಿ ನೀಡಿದ್ದೇವೆ.
ಬೇಕಾಗುವ ಸಾಮಗ್ರಿಗಳು: * 3-4 ಚಮಚ ಎಣ್ಣೆ* 5 ಸಾರು ಬಾಳೆ ಕಾಯಿ 4 ( ಸಿಪ್ಪೆ ತೆಗೆದು ಕತ್ತರಿಸಿರಬೇಕು)* ಸ್ವಲ್ಪ ಕರಿಬೇವಿನ ಎಲೆ* ಅರ್ಧ ಚಮಚದಷ್ಟು ಸಾಸಿವೆ* 1 ಚಮಚ ಕೆಂಪು ಮೆಣಸಿನ ಪುಡಿ* 2 ಚಮಚ ಹುಣಸೆ ಹಣ್ಣಿನ ರಸ* 1/2 ಚಮಚ ಅರಿಶಿಣ ಪುಡಿ* 5-6 ಬೆಳ್ಳುಳ್ಳಿ ಎಸಳು* ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ* 1 ಚಮಚದಷ್ಟು ಅಕ್ಕಿ* ರುಚಿಗೆ ತಕ್ಕ ಉಪ್ಪು
 
ತಯಾರಿಸುವ ವಿಧಾನ: 1. ಶುಂಠಿ, ಅಕ್ಕಿ, ಬೆಳ್ಳುಳ್ಳಿ ಇವುಗಳನ್ನು ಅರೆದು ಪೇಸ್ಟ್ ಮಾಡಿಡಬೇಕು. 2. ಈಗ ಬಾಳೆಕಾಯಿಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ ನೀರು ಬಸಿದು ಒಂದು ಪಾತ್ರೆಯಲ್ಲಿಡಬೇಕು. 3. ಈಗ ಪಾತ್ರೆಯನ್ನು ಉರಿಯ ಮೇಲಿಟ್ಟು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಮಾಡುವಾಗ ಕರಿಬೇವಿನ ಎಲೆ ಹಾಕಿ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರಿಶಿ ಪುಡಿ ಹಾಗೂ ಖಾರದ ಪುಡಿ ಹಾಕಿ 2 ನಿಮಿಷ ಹುರಿದು, ಹುಣಸೆ ಹಣ್ಣಿನ ರಸ ಹಾಕಿ ಸೌಟ್ ನಿಂದ ಒಮ್ಮೆ ತಿರುಗಿಸಿ ನಂತರ ಎರಡು ಕಪ್ ನೀರು ಹಾಕಬೇಕು, ಜೊತೆಗೆ ರುಚಿ ತಕ್ಕ ಉಪ್ಪ ಹಾಕಿ ಈ ಮಿಶ್ರಣವನ್ನು ಕುದಿಸಿ. 4. ನಂತರ ಬೇಯಿಸಿದ ಬಾಳೆಕಾಯಿಯನ್ನು ಹಾಕಿ ಗ್ರೇವಿಯ ಮಿಶ್ರಣವಾಗುವವರೆಗೆ ಬೇಯಿಸಿ ಉರಿಯಿಂದ ಇಳಿಸಿದರೆ ರುಚಿಕರವಾದ ಬಾಳೆಕಾಯಿ ಗ್ರೇವಿ ರೆಡಿ.
=========================================================================

ಮಟರ್ ಪನ್ನೀರ್ ಡ್ರೈ:

ಇಲ್ಲಿ ನೀಡಿರುವ ಮಟರ್ ಪನ್ನೀರ್ ಡ್ರೈಯಲ್ಲಿ ಬೆಳ್ಳುಳ್ಳಿ ಹಾಕಲಾಗಿದೆ. ಆದರೆ ವ್ರತಕ್ಕೆ ಈ ಅಡುಗೆ ಮಾಡುವುದಾದರೆ ಈರುಳ್ಳಿ, ಬೆಳ್ಳುಳ್ಳಿ ಹಾಕದೆಯೂ ಇದನ್ನು ಮಾಡಬಹುದು.
ಬೇಕಾಗುವ ಸಾಮಾಗ್ರಿಗಳು: ಪನ್ನೀರ್ ಕ್ಯೂಬ್ಸ್ 1 ಕಪ್ ಬಟಾಣಿ 1 ಕಪ್ ಈರುಳ್ಳಿ 2ಟೊಮೆಟೊ 1 ತೆಂಗಿನ ಕಾಯಿ ಹಾಲು ಅರ್ಧ ಕಪ್ಶುಂಠಿ , ಬೆಳ್ಳುಳ್ಳಿ ಪೇಸ್ಟ್ 2 ಚಮಚಖಾರದ ಪುಡಿ (ಖಾರಕ್ಕೆ ತಕ್ಕಷ್ಟು)ಗರಂ ಮಸಾಲ ಅರ್ಧ ಚಮಚಅರಿಶಿಣ ಪುಡಿ ಕೊತ್ತಂಬರಿ ಪುಡಿ ಅರ್ಧ ಚಮಚ ಜೀರಿಗೆ ಅರ್ಧ ಚಮಚ ರುಚಿಗೆ ತಕ್ಕ ಉಪ್ಪು ನೀರು ಅರ್ಧ ಕಪ್ ಎಣ್ಣೆ ಕರಿಬೇವಿನ ಎಲೆ
 
ತಯಾರಿಸುವ ವಿಧಾನ: * ಬಟಾಣಿಯನ್ನು ಕುಕ್ಕರ್ ನಲ್ಲಿ ಹಾಕಿ ಬೇಯಿಸಿಡಿ. * ಈಗ ಪಾತ್ರೆಯನ್ನು ಬಿಸಿ ಮಾಡಿ 4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ನಂತರ ಕರಿಬೇವಿನ ಎಲೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ . * ಪನ್ನೀರ್ ಕ್ಯೂಬ್ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿ ಬಟಾಣಿ ಹಾಕಿ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ ಹಾಕಿ ತೆಂಗಿನ ಕಾಯಿ ಹಾಲು ಸುರಿದು, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ. * ಮಿಶ್ರಣ ಸ್ವಲ್ಪ ಗ್ರೇವಿ ರೀತಿಯಲ್ಲಿ ಬೇಕಾದರೆ ಮಾಡಬಹುದು ಅಥವಾ ಇನ್ನೂ ಸ್ವಲ್ಪ ಹೊತ್ತು ಬೇಯಿಸಿದರೆ ಪನ್ನೀರ್ ಡ್ರೈ ರೆಡಿ.
========================================================================= 

ಬಾಳೆಹಣ್ಣಿನ ಬರ್ಫಿ:

ನವರಾತ್ರಿಗೆ ವಿಧವಿಧದ ಅಡುಗೆ ಮಾಡ ಬಯಸುವುದು ಸಹಜ, ಆದರೆ ಆ ಅಡುಗೆ ರುಚಿಯ ಜೊತೆಗೆ ಮಾಡಲು ಸುಲಭವಾಗಿದ್ದರೆ ಎಲ್ಲರು ಅಂತಹ ಅಡುಗೆಯನ್ನು ಮಾಡಬಯಸುತ್ತಾರೆ. ಅಂತಹ ಅಡುಗೆಯ ಪಟ್ಟಿಗೆ ಈ ಬಾಳೆಹಣ್ಣಿನ ಬರ್ಫಿಯನ್ನು ಸೇರಿಸಬಹದು.ಬಾಳೆಹಣ್ಣು ಪೌಷ್ಠಿಕದ ಅಂಶವನ್ನು ಅಧಿಕ ಹೊಂದಿದ್ದು ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು: 1. ಬಾಳೆಹಣ್ಣು 4 2.ಹಾಲು 1/2 ಕಪ್ 3.ಸಕ್ಕರೆ 2 ಕಪ್ 4. ತುಪ್ಪ2 ಚಮಚ 5. ತುರಿದ ತೆಂಗಿನ ಕಾಯಿ 1 ಕಪ್ 6. ಅಕ್ರೋಡ 1/2 ಕಪ್
 
ತಯಾರಿಸುವ ವಿಧಾನ: 1. ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಹಾಲಿನಲ್ಲಿ ಹಾಕಿ ಅದು ಗಟ್ಟಿಯಾಗುವರಿಗೂ ಕುದಿಸಿ.2. ಆ ಮಿಶ್ರಣಕ್ಕೆ ತುಪ್ಪ ಹಾಕಿ ಅದು ಕಂದು ಬಣ್ಣ ಬರುವರೆಗ ತಿರುಗಿಸುತ್ತಾ ಇರಿ.3. ಈಗ ಸಕ್ಕರೆ, ತೆಂಗಿನ ಕಾಯಿ, ಅಕ್ರೋಡ ಹಾಕಿ ತಿರುಗಿಸಿ.4. ನಂತರ ಈ ಮಿಶ್ರಣವನ್ನು ಆರಲು ಬಿಟ್ಟು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಈಗ ಬಾಳೆಹಣ್ಣಿನ ಬರ್ಫಿ ಸವಿಯಲು ರೆಡಿ.
=========================================================================

ಸಾಬುದಾನ ತಾಲಿಪಟ್:

ನವರಾತ್ರಿ ಸಮಯದಲ್ಲಿ ಮತ್ತು ಇತರ ಹಬ್ಬ, ವ್ರತ ಸಮಯದಲ್ಲಿ ಉಪವಾಸ ಮಾಡುವವರಿಗಾಗಿ ಈ ತಾಲಿಪಟ್ ರೆಸಿಪಿ ನೀಡಲಾಗಿದೆ.
ಬೇಕಾಗುವ ಸಾಮಾಗ್ರಿಗಳು ಸಾಬುದಾನ 1 ಕಪ್ ಆಲೂಗಡ್ಡೆ ಅರ್ಧ ಕಪ್ (ಬೇಯಿಸಿ, ತುರಿದ ಆಲೂಗಡ್ಡೆ) ಕೊತ್ತಂಬರಿ 2 ಚಮಚ(ಕತ್ತರಿಸಿದ್ದು)ರುಚಿಗೆ ತಕ್ಕ ಉಪ್ಪು ಹಸಿ ಮೆಣಸಿನಕಾಯಿ 1ರೋಸ್ಟ್ ಮಾಡಿದ ನೆಲಗಡಲೆ ಅರ್ಧ ಕಪ್ ನಿಂಬೆ ರಸ 1 ಚಮಚ ಗೋಧಿ ಹಿಟ್ಟು ಅರ್ಧ ಕಪ್ ಎಣ್ಣೆ
 

ತಯಾರಿಸುವ ವಿಧಾನ:* ಸಾಬುದಾನವನ್ನು ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಿ(8 ಗಂಟೆಗಳ ನೆನೆ ಹಾಕಿ).* ಗೋಧಿ ಹಿಟ್ಟು ಬಿಟ್ಟು ಈಗ ಸಾಬುದಾನ ಮತ್ತು ಉಳಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ.* ನಂತರ ಅದನ್ನು ಕಡಲೆ ಹಿಟ್ಟಿನ ಜೊತೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕೆಲೆಸಿ(ಹಿಟ್ಟು ತುಂಬಾ ನೀರಾಗಬಾರದು, ಗಟ್ಟಿಯಾಗಿಯೂ ಇರಬಾರದು). ನಂತರ ಮೀಡಿಯಂ ಗಾತ್ರದಲ್ಲಿ ಉಂಡೆ ಕಟ್ಟಿ.* ಈಗ ಪ್ಲಾಸ್ಟಿಕ್ ಶೀಟ್ ಗೆ ಎಣ್ಣೆ ಸವರಿ ಅದರಲ್ಲಿ ಸ್ವಲ್ಪ ಉಂಡೆ ಕಟ್ಟಿದ ಹಿಟ್ಟು ಹಾಕಿ ಕೈಯಿಂದ ವೃತ್ತಾಕಾರವಾಗಿ ತಟ್ಟಿ.* ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ, ನಂತರ ತಟ್ಟಿದ ಹಿಟ್ಟನ್ನು ಹಾಕಿ ಅದರ ಮೇಲೆ ಎಣ್ಣೆ ಸವರಿ 1 ನಿಮಿಷ ಬೇಯಿಸಿ, ನಂತರ ಮಗುಚಿ ಹಾಕಿ ಬೇಯಿಸಿ. ತಾಲಿಪಟ್ ಬೆಂದ ನಂತರ ತೆಗೆಯಿರಿ.ರೆಡಿಯಾದ ತಾಲಿಪಟ್ ಅಥವಾ ತಾಲಿಪಿಟ್ಟು ಅನ್ನು ಕೊತ್ತಂಬರಿ ಚಟ್ನಿ ಜೊತೆ ಸವಿಯಿರಿ.
=========================================================================

ಹೆಸರುಬೇಳೆ ಹಲ್ವಾ:

ವಿಶೇಷ ಸಂದರ್ಭಗಳಲ್ಲಿ ಹೆಸರುಬೇಳೆಯನ್ನು ಬಳಸಿ, ಹಲ್ವಾ, ಪಾಯಸ, ಒಬ್ಬಟ್ಟು ಮುಂತಾದ ಸಿಹಿ ತಿನಿಸು ಮಾಡಿ ಸವಿದಿರುವ ಸಾಧ್ಯತೆ ಇಲ್ಲದಿಲ್ಲ. ಸರಳ ವಿಧಾನದಲ್ಲಿ ಹೆಸರುಬೇಳೆ ಹಲ್ವಾ ಮಾಡುವ ರೀತಿಯನ್ನು ನೋಡೋಣ ಬನ್ನಿ

ಬೇಕಾದ ಸಾಮಾಗ್ರಿ: ಹೆಸರು ಬೇಳೆ : ಒಂದೂವರೆ ಕಪ್ ಹಾಲಿನ ಖೋವಾ :ಒಂದೂವರೆ ಕಪ್ ಹಾಲು :ಎರಡೂವರೆ ಕಪ್ ಸಕ್ಕರೆ: 1ಕಪ್ ತುಪ್ಪ: 1 ಕಪ್ ಗೋಧಿ ಹಿಟ್ಟು : 3 ಟೀ ಚಮಚ ಒಣದ್ರಾಕ್ಷಿ, ಗೋಡಂಬಿ, ಬಾದಾಮಿ ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿ : 2 ಟೀ ಚಮಚ
 
ಮಾಡುವ ವಿಧಾನ: ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು, ಶುದ್ಧವಾದ ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿಡಿ. ನೆಂದ ಬೇಳೆಯನ್ನು ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ,(ರುಬ್ಬಲು ನೀರನ್ನು ಕಡಿಮೆ ಹಾಕಿ)ತೆಳ್ಳನೆಯ ಬಟ್ಟೆಯಲ್ಲಿ ರುಬ್ಬಿದ ಬೇಳೆಯನ್ನು ಹಾಕಿ ನೀರನ್ನು ಬಸಿಯಿರಿ. ದಪ್ಪ ತಳವಿರುವ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಸ್ವಲ್ಪ ಗೋಧಿ ಹಿಟ್ಟು ಹಾಕಿ ಎರಡು ಮೂರು ನಿಮಿಷ ಹುರಿಯಿರಿ. ಹೆಸರುಬೇಳೆ ಮಿಶ್ರಣವನ್ನು ,ಗೋಧಿ ಹಿಟ್ಟಿನೊಂದಿಗೆ ಬೆರಸಿ ಸುಮಾರು 20 ನಿಮಿಷಗಳ ಕಾಲ ಕೈಯಾಡಿಸುತ್ತಿರಿ. ಬಾಣಲೆಯಲ್ಲಿ ಮಿಶ್ರಣವು ಗಾಢವಾದ ಬಣ್ಣಕ್ಕೆ ತಿರುಗಿದ ನಂತರ, ಖೋವಾವನ್ನು ಪುಡಿ ಮಾಡಿ ಹಾಕಿ ನಸುಗೆಂಪು ಬಣ್ಣ ಬರುವ ತನಕ ಹುರಿಯಿರಿ. ಈ ಮಿಶ್ರಣಕ್ಕೆ ಹಾಲು, ಸಕ್ಕರೆ ಸೇರಿಸಿ ಕೈಯಾಡಿಸುತ್ತಾ ಇರಿ. ಪಾತ್ರೆ ತಳ ಹತ್ತದಂತೆ ಜಾಗ್ರತೆ ವಹಿಸಿ. ಮಿಶ್ರಣವು ಸಮನಾಗಿ ಬೆರತ ಮೇಲೆ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿರಿ. ಏಲಕ್ಕಿ ಪುಡಿ, ಒಣದ್ರಾಕ್ಷಿ, ಗೋಡಂಬಿ ಸೇರಿಸಿ ಬಿಸಿಬಿಸಿಯಾಗಿ ರುಚಿಕರವಾದ ಹಲ್ವಾವನ್ನು ಸೇವಿಸಬಹುದು. 
=========================================================================

ಗೋದಿ ಹಲ್ವಾ: 

ಬೇಕಾಗುವ ಸಾಮಾಗ್ರಿಗಳು:
ಗೋಧಿ ಹಿಟ್ಟು 2 ಕಪ್
ಸಕ್ಕರೆ 2 ಕಪ್
ಏಲಕ್ಕಿ ಪುಡಿ 2 ಚಮಚ
ಬಾದಾಮಿ 4-5 (ಚಿಕ್ಕ ತುಂಡುಗಳಾಗಿ ಮಾಡಿ)
ಒಣ ದ್ರಾಕ್ಷಿ 4-5
ನೀರು 1 ಕಪ್
ತುಪ್ಪ 1 ಕಪ್ ತಯಾರಿಸುವ

ವಿಧಾನ: ಒಂದು ಪಾತ್ರೆಯನ್ನು ಗ್ಯಾಸ್ ಉರಿಯ ಮೇಲೆ ಇಡಬೇಕು. ನಂತರ ಪಾತ್ರೆಗೆ ತುಪ್ಪ ಹಾಕಿ ತುಪ್ಪ ಬಿಸಿಯಾದಾಗ ಬಿಸಿಯಾದಾಗ ಅದರಲ್ಲಿ ಗೋಧಿ ಹಿಟ್ಟು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
ಗೋಧಿ ಕಡು ಕಂದು ಬಣ್ಣ ಬಂದ ಮೇಲೆ ಅದಕ್ಕೆ ನಿಧಾನಕ್ಕೆ ನೀರು ಸುರಿಯಬೇಕು. ಆಗ ಗೋಧಿ ಗಟ್ಟಿಯಾಗದಿರಲು ಸೌಟ್ ನಿಂದ ಸರಿಯಾಗಿ ತಿರುಗಿಸುತ್ತಿರಬೇಕು.


ನೀರನ್ನು ಗೋಧಿ ಹೀರಿಕೊಂಡ ನಂತರ ಸಕ್ಕರೆ ಹಾಕಿ ಚೆನ್ನಾಗಿ ತಿರುಗಿಸಬೇಕು. ನಂತರ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಬೇಕು. ಮಿಶ್ರಣ ಗಟ್ಟಿಯಾದ ನಂತರ ಅದನ್ನು ಉರಿಯಿಂದ ತೆಗೆದು ಅದಕ್ಕೆ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಹಾಕಿದರೆ ರುಚಿಕರವಾದ ಗೋಧಿ ಹಲ್ವಾ ರೆಡಿ. ರೆಡಿಯಾದ ಹಲ್ವಾವನ್ನು ಸ್ವಲ್ಪ ತಣ್ಣಗಾದ ಮೇಲೆ ತಿನ್ನಿ.
=========================================================================

ಮೊದಲನೆಯ ದಿನ ಖಾದ್ಯ-ಸೌತೆಕಾಯಿ ಸುಟ್ಟವು

ಬೇಕಾಗುವ ಸಾಮಗ್ರಿಗಳು;
ಸೌತೆಕಾಯಿ ತುರಿ-೧ ಕಪ್
ಅಕ್ಕಿ-೨ ಕಪ್
ಬೆಲ್ಲ- ೧/೪ ಕಪ್
ಏಲಕ್ಕಿ
ತುಪ್ಪ
ಉಪ್ಪು

ಮಾಡುವ ವಿಧಾನ-ಅಕ್ಕಿಯನ್ನು ಆರು ತಾಸು ನೀರಲ್ಲಿ ನೆನೆ ಹಾಕಿ ಸೌತೆಕಾಯಿ ತುರಿಯೊಂದಿಗೆ ರುಬ್ಬಿ. ಬೆಲ್ಲ,ಏಲಕ್ಕಿ ಪುಡಿ ಹಾಗು ಉಪ್ಪನ್ನು ರುಚಿಗೆ ತಕ್ಕಷ್ಟು ಸೇರಿಸಿ. ರುಬ್ಬಿದ ಹಿಟ್ಟನ್ನು ಒಲೆಯ ಮೇಲಿಟ್ಟು ಸ್ವಲ್ಪ ದಪ್ಪಗಾಗುವವರೆಗೆ ಕುದಿಸಿ. ದೊಸೆ ಮಾಡುವ ಕಾದ ತವಾದ ಮೇಲೆ ಸಣ್ಣ ಸಣ್ಣ ದೋಸೆಗಳನ್ನು ಮಾಡಿ ತುಪ್ಪ ಹಾಕಿ ಎರಡೂ ಕಡೆ ಬೇಯಿಸಿ.
=========================================================================

ಎರಡನೆಯ ದಿನ ಖಾದ್ಯ-ಎರಿಯಪ್ಪ

ಬೇಕಾಗುವ ಸಾಮಗ್ರಿಗಳು;
ಅಕ್ಕಿ- ೧ ಕಪ್
ಗೋದಿ ಹಿಟ್ಟು- ೧ ಕಪ್
ಬೆಲ್ಲ- ೧/೨ ಕಪ್
ಕರಿಯಲು ಎಣ್ಣೆ

ಮಾಡುವ ವಿಧಾನ- ಅಕ್ಕಿಯನ್ನು ನಾಲ್ಕು ಗಂಟೆಗಳ ಕಾಲ ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟಿಗೆ ಗೋದಿ ಹಿಟ್ಟು,ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. (ಮಿಶ್ರಣವು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು). ಮಧ್ಯ ಗುಂಡಿ ಇರುವ ಎಣ್ಣೆ ಬಾಣಲಿಗೆ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಹಿಟ್ಟನ್ನು ಸೌಟಿನಿಂದ ಎಣ್ಣೆಗೆ ಹಾಕಬೇಕು. ಎರಡೂ ಕಡೆ ಚೆನ್ನಾಗಿ ಬೇಯಿಸಿ ತೆಗೆಯಬೇಕು.
=========================================================================

ಮೂರನೆಯ ದಿನ ಖ್ಯಾದ್ಯ-ಸುಕ್ಕಿನ ಉಂಡೆ

ಬೇಕಾಗುವ ಸಾಮಗ್ರಿಗಳು;
ಕಡ್ಲೆ ಬೇಳೆ-೧/೨ ಕಪ್
ಕಾಯಿತುರಿ-೧/೨ ಕಪ್
ಬೆಲ್ಲ-೧ ಕಪ್
ಗೋದಿ ಹಿಟ್ಟು- ೨ ಕಪ್
ಚಿಟಿಕೆ ಉಪ್ಪು
ಏಲಕ್ಕಿ ಪುಡಿ
ಕರಿಯಲು ಎಣ್ಣೆ

ಮಾಡುವ ವಿಧಾನ- ಕಡಲೆ ಬೇಳೆಯನ್ನು ಚೆನ್ನಾಗಿ ಬೇಯಿಸಿ ಕಾಯಿತುರಿ ಮತ್ತು ಬೆಲ್ಲವನ್ನು ಸೇರಿಸಿ ಒಲೆಯ ಮೇಲಿಟ್ಟು ಚೆನ್ನಾಗಿ ಆರಿಸಿಕೊಳ್ಳ ಬೇಕು. ನಂತರ ಕಡಲೆ ಬೆಳೆ ಮಿಶ್ರಣವನ್ನು ರುಬ್ಬಿಕೊಂಡು ಏಲಕ್ಕಿ ಪುಡಿ ಸೇರಿಸಿ ನಿಂಬೆ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಬೇಕು. ಗೋದಿ ಹಿಟ್ಟಿಗೆ ಒಂದು ಚಮಚ ಬೆಲ್ಲ ಮತ್ತು ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕದಡಿಕೊಳ್ಳಬೇಕು. ಉಂಡೆಯನ್ನು ಗೋದಿ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಬೇಕು.
=========================================================================

ನಾಲ್ಕನೆಯ ದಿನ ಖಾದ್ಯ-ಕಾಯಿ ಕಡುಬು

ಬೇಕಾಗುವ ಸಾಮಗ್ರಿಗಳು;
ಅಕ್ಕಿ-೧ ಕಪ್
ಗೋದಿ ಹಿಟ್ಟು-೧/೨ ಕಪ್
ಕಾಯಿ ತುರಿ-೧ ಕಪ್
ಬೆಲ್ಲ-೧/೨ ಕಪ್
ತುಪ್ಪ-೪ ಚಮಚ
ಏಲಕ್ಕಿ ಪುಡಿ
ಉಪ್ಪು

ಮಾಡುವ ವಿಧಾನ- ಅಕ್ಕಿಯನ್ನು ನಾಲ್ಕು ತಾಸು ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬ ಬೇಕು. ರುಬ್ಬಿದ ಹಿಟ್ಟಿಗೆ ಗೋದಿ ಹಿಟ್ಟು ಮತ್ತು ಉಪ್ಪನ್ನು ಸೇರಿಸಬೇಕು. ತಯಾರಿಸಿದ ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ನೀರಾಗಿರಬೇಕು. ಹಿಟ್ಟನ್ನು ಒಂದು ಬಾಣಲಿಗೆ ಹಾಕಿ ತುಪ್ಪವನ್ನು ಸೇರಿಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವವರೆಗೆ ಮಗುಚಬೇಕು. ಉಂಡೆ ಕಟ್ಟುವ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ. ಕೈಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಉಂಡೆ ಮಾಡಿ ಬಟ್ಟಲಿನ ಆಕಾರ ಮಾಡಿ ಕಾಯಿ-ಬೆಲ್ಲದ ಹೂರಣವನ್ನು ಒಳಗಿಟ್ಟು ಮಡಿಚಿ ಸುತ್ತಲೂ ಸೇರಿಸಬೇಕು. ನಂತರ ಉಗಿಯ ಮೇಲೆ ಹತ್ತು ನಿಮಿಷ ಬೇಯಿಸಬೇಕು.
=========================================================================

ಐದನೆಯ ದಿನ ಖಾದ್ಯ-ಖರ್ಜಿ ಕಾಯಿ

ಬೇಕಾಗುವ ಸಾಮಗ್ರಿಗಳು;
ತೆಂಗಿನ ತುರಿ-೧ ಕಪ್
ಬೆಲ್ಲ-೧/೨ ಕಪ್
ಮೈದ-ಅರ್ಧ ಕಪ್
ಚಿರೋಟಿ ರವೆ- ಅರ್ಧ ಕಪ್
ಏಲಕ್ಕಿ ಪುಡಿ
ತುಪ್ಪ-೨ ಚಮಚ
ಕರಿಯಲು ಎಣ್ಣೆ
ಉಪ್ಪು

ಮಾಡುವ ವಿಧಾನ- ತೆಂಗಿನ ತುರಿ,ಬೆಲ್ಲ ಮತ್ತು ಏಲಕ್ಕಿ ಪುಡಿ ಸೇರಿಸಿ ಕುದಿಸಿ ಹೂರಣ ತಯಾರಿಸಿಟ್ಟುಕೊಳ್ಳಿ. ಮೈದಾ ಮತ್ತು ರವೆಯನ್ನು ಸ್ವಲ್ಪ ತುಪ್ಪ ಮತ್ತು ಉಪ್ಪು ಹಾಕಿ ಕಲಸಿ ಎರಡು ತಾಸು ಹಾಗೇ ಬಿಡಿ. ನಂತರ ಪೂರಿಯಂತೆ ಲಟ್ಟಿಸಿ ಒಳಗೆ ಹೂರಣವನ್ನಿಟ್ಟು ಮಡಚಿ ಸುತ್ತಲೂ ಸೇರಿಸಿ. ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವ ಹಾಗೆ ಕರಿಯಿರಿ.
=========================================================================

ಆರನೆಯ ದಿನ ಖಾದ್ಯ-ಹಾಲುಂಡೆ ಕಡುಬು

ಬೇಕಾಗುವ ಸಾಮಗ್ರಿಗಳು;
ಅಕ್ಕಿ ರವೆ-೧ ಕಪ್
ಬೆಲ್ಲ- ಒಂದುವರೆ ಕಪ್
ಹಾಲು-೧ ಕಪ್
ಕಾಯಿ ತುರಿ-೧ ಕಪ್
ಏಲಕ್ಕಿ ಪುಡಿ-೧/೨ ಚಮಚ
ಉಪ್ಪು

ಮಾಡುವ ವಿಧಾನ- ಅಕ್ಕಿ ರವೆಯನ್ನು ಚೆನ್ನಾಗಿ ಹುರಿದುಕೊಂಡು ಅದಕ್ಕೆ ಬಿಸಿ ನೀರು ಮತ್ತು ಹಾಲು ಹಾಕಿ ಬೇಯಿಸಬೇಕು. ಬೆಂದ ನಂತರ ಬೆಲ್ಲ,ಕಾಯಿತುರಿ ಹಾಗು ಉಪ್ಪು ಹಾಕಿ ಮಗುಚಬೇಕು. ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ನಂತರ ನಿಂಬೆ ಗಾತ್ರದ ಉಂಡೆ ಮಾಡಿ ಹಬೆಯಲ್ಲಿ ಹತ್ತು ನಿಮಿಷ ಬೇಯಿಸಬೇಕು.
=========================================================================

ಏಳನೆಯ ದಿನ ಖಾದ್ಯ-ಶ್ಯಾವಿಗೆ

ಬೇಕಾಗುವ ಸಾಮಗ್ರಿಗಳು;
ಅಕ್ಕಿ-೨ ಕಪ್
ಬೆಲ್ಲ-ಅರ್ಧ ಕಪ್
ಏಲಕ್ಕಿ ಪುಡಿ-ಅರ್ಧ ಚಮಚ
ಉಪ್ಪು

ಮಾಡುವ ವಿಧಾನ- ಅಕ್ಕಿಯನ್ನು ನಾಲ್ಕು ತಾಸು ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬಿ. ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರುವಂತೆ ಹಿಟ್ಟನ್ನು ತಯಾರಿಸಿಕೊಳ್ಳಿ. ಬೆಲ್ಲ,ಉಪ್ಪು ಹಾಗು ಏಲಕ್ಕಿ ಪುಡಿ ಸೇರಿಸಿ. ನಂತರ ಹಿಟ್ಟನ್ನು ಇಡ್ಲಿ ಪಾತ್ರೆಗೆ ಹಾಕಿ ಆವಿಯಲ್ಲಿ ಹತ್ತು ನಿಮಿಷ ಬೇಯಿಸಿ ಬಿಸಿ ಇರುವಾಗಲೇ ಶ್ಯಾವಿಗೆ ಒರಳಿನಲ್ಲಿ ಹಾಕಿ ಒತ್ತಿ.
=========================================================================

ಎಂಟನೆಯ ದಿನ ಖಾದ್ಯ- ಅರಳು ಕಡುಬು

ಬೇಕಾಗುವ ಸಾಮಗ್ರಿಗಳು;
ಅಕ್ಕಿ-೨ ಕಪ್
ಅರಳು- ೨ ಕಪ್
ಬೆಲ್ಲ- ಅರ್ದ ಕಪ್
ಉಪ್ಪು ಹಾಗು ಏಲಕ್ಕಿ ಪುಡಿ

ಮಾಡುವ ವಿಧಾನ- ಅಕ್ಕಿಯನ್ನು ನಾಲ್ಕು ತಾಸು ನೀರಲ್ಲಿ ನೆನೆಸಿ ತರಿ ತರಿಯಾಗಿ ರುಬ್ಬಿಟ್ಟುಕೊಳ್ಳಿ. ಅರಳನ್ನು ನೆನೆಸಿ ನುಣ್ಣಗೆ ರುಬ್ಬಿ ಬೆಲ್ಲ,ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ. ರುಬ್ಬಿದ ಮಿಶ್ರಣ ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು. ರುಬ್ಬಿಟ್ಟ ನಾಲ್ಕು-ಐದು ತಾಸಿನ ನಂತರ ಇಡ್ಲಿ ತಟ್ಟೆಗೆ ಹಾಕಿ ಉಗಿಯಲ್ಲಿ ಬೇಯಿಸಿ.
=========================================================================

ಒಂಬತ್ತೆನೆಯ ದಿನ ಖಾದ್ಯ- ಚಕ್ಲಿ ಮತ್ತು ಪಾಯಸ

ಚಕ್ಲಿಗೆ ಬೇಕಾಗುವ ಸಾಮಗ್ರಿಗಳು;
ದಪ್ಪ ಅಕ್ಕಿ-೩ ಕಪ್
ಉದ್ದಿನ ಬೇಳೆ-ಅರ್ಧ ಕಪ್
ಹೆಸರು ಬೇಳೆ-ಅರ್ಧ ಕಪ್
ಹುರಿಗಡಲೆ- ಅರ್ಧ ಕಪ್
ಕಡ್ಲೆ ಬೇಳೆ-೨ ಚಮಚ
ಜೀರಿಗೆ-೨ ಚಮಚ
ಓಮಿನ ಕಾಳಿನ ಪುಡಿ-ಅರ್ಧ ಚಮಚ
ಉಪ್ಪು
ಬೆಣ್ಣೆ-ನಿಂಬೆ ಗಾತ್ರ

ಚಕ್ಲಿ ಮಾಡುವ ವಿಧಾನ- ಅಕ್ಕಿಯನ್ನು ತೊಳೆದು ನೀರನ್ನು ಬಸಿದು ಆರಿದ ನಂತರ ಚೆನ್ನಾಗಿ ಹುರಿಯಬೇಕು. ಕಾಳು ಕಡಿಗಳನ್ನು ಪ್ರತ್ಯೇಕವಾಗಿ ಹುರಿದು ಅಕ್ಕಿಯ ಜೊತೆ ಎಲ್ಲವನ್ನೂ ಸೇರಿಸಿ ನುಣ್ಣಗೆ ಹಿಟ್ಟು ಮಾಡಿಟ್ಟುಕೊಳ್ಳಬೇಕು. ಕುದಿಯುವ ನೀರಿನಲ್ಲಿ ಉಪ್ಪು,ಬೆಣ್ಣೆ ಹಾಗು ಹಿಟ್ಟನ್ನು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲೆಸಿ. ಚಕ್ಕುಲಿ ಒರಳಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿಯಬೇಕು.

ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು;
ಅಕ್ಕಿ-೧ ಕಪ್
ಹಾಲು-೨ ಕಪ್
ಬೆಲ್ಲ-ಅರ್ಧ ಕಪ್
ಏಲಕ್ಕಿ ಪುಡಿ

ಪಾಯಸ ಮಾಡುವ ವಿಧಾನ- ಅಕ್ಕಿಯನ್ನು ತೊಳೆದುಕೊಂಡು ಮೆತ್ತಗಿನ ಅನ್ನ ಮಾಡಿ. ನಂತರ ಅದಕ್ಕೆ ಬೆಲ್ಲವನ್ನು ಹಾಕಿ ಕುದಿಸಿ, ಹಾಲು ಏಲಕ್ಕಿ ಪುಡಿ ಸೇರಿಸಿ.
=========================================================================

ಹತ್ತನೆಯ ದಿನ ಖಾದ್ಯ-ಹೋಳಿಗೆ

ಬೇಕಾಗುವ ಸಾಮಗ್ರಿಗಳು;
ಕಡ್ಲೆ ಬೇಳೆ-೧ ಕಪ್
ಬೆಲ್ಲ-೧ ಕಪ್
ಗೋದಿ ಹಿಟ್ಟು-ಅರ್ಧ ಕಪ್
ಮೈದ ಹಿಟ್ಟು-ಅರ್ಧ ಕಪ್
ಕೊಬರಿ ಎಣ್ಣೆ-೪ ಚಮಚ
ಏಲಕ್ಕಿ ಪುಡಿ
ಉಪ್ಪು ಹಾಗು ಅರಿಶಿನ ಪುಡಿ-ಒಂದು ಚಿಟಿಕೆ

ಮಾಡುವ ವಿಧಾನ- ಕಡ್ಲೆ ಬೇಳೆಯನ್ನು ಬೇಯಿಸಿ ಬೆಲ್ಲ ಹಾಕಿ ಆರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು. ರುಬ್ಬಿದ ಹೂರಣಕ್ಕೆ ಏಲಕ್ಕಿ ಪುಡಿ ಸೇರಿಸಿ. ಗೋದಿ ಹಿಟ್ಟು,ಮೈದಾ ಹಿಟ್ಟು,ಎಣ್ಣೆ,ಉಪ್ಪು ಹಾಗು ಅರಿಶಿನ ಪುಡಿ ಸೇರಿಸಿ ಕಣಕವನ್ನು ಮಾಡಿಟ್ಟುಕೊಳ್ಳಿ. ಕಣಕದಲ್ಲಿ ಹೂರಣವನ್ನಿಟ್ಟು ಎಣ್ಣೆ ಅಥವ ಮೈದಾ ಹಿಟ್ಟಿನಲ್ಲಿ ಅದ್ದಿ ತೆಳ್ಳಗೆ ಲಟ್ಟಿಸಿ ತವಾದ ಮೇಲೆ ಬೇಯಿಸಿ.
 
=========================================================================
 
ಕೃಪೆ: ಕನ್ನಡ ಟೈಮ್ಸ್ ಮತ್ತು ದಟ್ಸ್ ಕನ್ನಡ